ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಸಮಯ ಸ್ಫೂರ್ತಿ: ತಾಳ ಮದ್ದಳೆಯ ಒರೆಗಲ್ಲು

ಲೇಖಕರು : ಗ.ನಾ. ಭಟ್ಟ
ಗುರುವಾರ, ಫೆಬ್ರವರಿ 18 , 2016

ತಾಳ ಮದ್ದಳೆ ಎಂಬುದು ಕನ್ನಡದ ಒಂದು ವಿಶಿಷ್ಟ ರಂಗಭೂಮಿ. ಪ್ರಾಯಶಃ ಅನ್ಯಭಾಷೆಗಳಲ್ಲಿ ಇಲ್ಲದಿರುವ ರಂಗಪ್ರಕಾರವಿದು. ಯಕ್ಷಗಾನ ರಂಗಭೂಮಿಯ ಒಂದು ಕವಲಾಗಿರುವ ಈ ರಂಗಪ್ರದರ್ಶನವು ಯಕ್ಷಗಾನ ಪ್ರಸಂಗಗಳೆಂಬ ಗೇಯಕಾವ್ಯಗಳ ಪದ್ಯ- ಹಾಡುಗಾರಿಕೆಗಳನ್ನು ಆಧರಿಸಿ ‘ಅರ್ಥಧಾರಿ’ ಗಳೆಂಬ ಮಾತುಗಾರ- ನಟರು ನಿರ್ಮಿಸುವ ಅಶುನಾಟಕ ಅಥವಾ ಶ್ರವ್ಯರೂಪಕ.

ಕಲೆಯ ಮುಖ್ಯ ಅಂಗಗಳಾದ ಸಾತ್ವಿಕ, ಆಂಗಿಕ, ವಾಚಿಕ, ಆಹಾರ್ಯಗಳಲ್ಲಿ ವಾಚಿಕಾಭಿನಯವೇ ಪ್ರಧಾನವಾಗಿರುವ ಈ ಕಲೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ. ಜಾನಪದವೆಂಬ ಹಣೆಪಟ್ಟಿ ಇದಕ್ಕೆ ಅಂಟಿಕೊಂಡಿದ್ದರೂ ಇದು ಶಿಷ್ಟ, ಶಾಸ್ತ್ರೀಯ, ಸಂಸ್ಕೃತ ಕಲೆ. ವೇಷಭೂಷಣ, ಬಣ್ಣಗಾರಿಕೆ, ರಂಗಸಜ್ಜಿಕೆ, ಕುಣಿತ ಇವು ಯಾವುವೂ ಇಲ್ಲದೇ ಮಾತಿನ ಮಂಟಪದಿಂದಲೇ ಕೇಳುಗರ ಮನೋಮಹಿಯಲ್ಲಿ ಮರೆಯಲಾಗದ ಭದ್ರ ಮುದ್ರೆಯೊತ್ತುವ, ಪುರಾಣ ಲೋಕವನ್ನು ಸಾಕಾರಗೊಳಿಸುವ, ಮನರಂಜನೆ ಮತ್ತು ಜೀವೋತ್ಕರ್ಷವನ್ನು ಏಕಕಾಲಕ್ಕೆ ಉಂಟು ಮಾಡುವ, ಬುದ್ಧಿಯನ್ನು ಚುರುಕುಗೊಳಿಸುವ, ಚಮತ್ಕಾರಿಕ ಸಂಭಾಷಣೆಯ ಮೂಲಕ ಪಾತ್ರಗಳ ಆಳ- ನೀಳವನ್ನು ಪರಿಚಯಿಸುವ ಈ ಸುಂದರ ಕಲೆ ಅನುಪಮ ಪ್ರಭಾವಶಾಲಿ.

ಕಥಾನಿರೂಪಣೆ, ಸನ್ನಿವೇಶ ವರ್ಣನೆ, ಸಂವಾದ, ಪಾತ್ರಪೋಷಣೆ, ಶಬ್ದಸಂದರ್ಭ, ಶಬ್ದವ್ಯತ್ಪತ್ತಿ, ಧಾಟಿ, ಶೈಲಿ, ಪಾಂಡಿತ್ಯ, ವೈಚಾರಿಕತೆ, ಭಾವಪೂರ್ಣತೆ, ಹಾಸ್ಯ, ಕರುಣ- ವೀರಾದಿ ರಸಪುಷ್ಟಿ, ಭಕ್ತಿಯ ಆವೇಶ ಮುಂತಾದ ಸ್ವಾರಸ್ಯ ವಿಶೇಷದಿಂದ ಈ ಒಂದೊಂದಕ್ಕೂ ಅಥವಾ ಎಲ್ಲದಕ್ಕೂ ಶ್ರೋತೃವರ್ಗದ ಪುರಸ್ಕಾರವನ್ನು ಪಡೆದಿರುವ ಇದು ಕರಾವಳಿ ಜಿಲ್ಲೆಯವರ ಆರಾಧ್ಯ ಕಲೆಯಾಗಿದೆ.

ತಾಳಮದ್ದಳೆಯಲ್ಲಿ ‘ಮಾತು’ ಜೀವಧಾತು. ಇಲ್ಲಿ ಮಾತು ಆತ್ಮದ ಸ್ಥಾನದಲ್ಲಿರುತ್ತದೆ. ಆದರೆ ‘ಮಾತು’ ನಾಟಕ, ಸಿನಿಮಾಗಳಂತೆ ಸಿದ್ಧ ಸಂಭಾಷಣೆಯಲ್ಲಿ ಇರುವುದಿಲ್ಲ. ಅರ್ಥಧಾರಿ (ಪದ್ಯಾರ್ಥಗಳನ್ನು ವಿವರಿಸುವವ) ಮಾತುಗಳನ್ನು ಕಂಠಪಾಠ ಮಾಡಿಕೊಂಡಿರುವುದಿಲ್ಲ. ಹಾಗೆಂದು ಅರ್ಥಧಾರಿ ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪುರಾಣ, ಕಾವ್ಯೇತಿಹಾಸಗಳ ಸತತ ಅಭ್ಯಾಸದಿಂದ, ನಿರಂತರ ಚಿಂತನದಿಂದ ಆತ ಅರ್ಹತೆಯನ್ನು ಪಡೆದುಕೊಂಡಿರಬೇಕಾಗುತ್ತದೆ. ಪ್ರಸಂಗ ಪದ್ಯದಲ್ಲಿರುವ ವಾಚ್ಯಾರ್ಥ, ಸೂಚ್ಯಾರ್ಥ, ಔಚಿತ್ಯ, ಭಾವ, ಧ್ವನಿ, ರಸ ಮುಂತಾದುವನ್ನು ಸರಿಯಾಗಿ ಗ್ರಹಿಸಿ ತನ್ನ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅರ್ಥಗಾರಿಕೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಸ್ಥಾಪಿಸಬೇಕಾಗುತ್ತದೆ.

ತಾಳಮದ್ದಳೆಯಲ್ಲಿ ಭಾಗವಹಿಸುವವ ಮಾತಿನ ಹಲವು ಮೈಗಳಿಗೆ ಮೈಯೆಲ್ಲ ಕಣ್ಣಾಗಿ ಕೂತಿರಬೇಕಾಗುತ್ತದೆ. ಇಲ್ಲದಿದ್ದರೆ ಎದುರು ಪಾತ್ರಧಾರಿಯಿಂದ ಅಪಾಯ ತಪ್ಪಿದ್ದಲ್ಲ. ‘ಅರ್ಥಧಾರಿ’ ಆಡುವ ‘ಮಾತು’ ಮಂತ್ರವಾಗಿ, ಶಾಸ್ತ್ರವಾಗಿ, ಕಾವ್ಯವಾಗಿ, ಕಲೆಯಾಗಿ ಅರಳಬೇಕಾದರೆ ‘ಅರ್ಥಧಾರಿ’ ಗಳಿಗೆ ಮೂಲಗ್ರಂಥಗಳ ಸಮಗ್ರ ಪರಿಚಯ, ಪ್ರಸಂಗ, ಪಠ್ಯಪುಸ್ತಕಗಳ ಆಳವಾದ ಅಧ್ಯಯನ, ಲೋಕಾನುಭವ, ವೈಮರ್ಶಿಕ ದೃಷ್ಟಿ, ವಿದ್ವತ್, ಪ್ರತಿಭೆ ಇವೆಲ್ಲವೂ ಮುಪ್ಪರಿಗೊಂಡಿರಬೇಕಾಗುತ್ತದೆ. ಇದೊಂದು ವಾಙ್ಮಯ ತಪಸ್ಸೇ ಸರಿ. ಇಲ್ಲದಿದ್ದರೆ ತಾಳಮದ್ದಳೆ ಕಾಡುಹರಟೆ, ಕೊರೆತ, ರಗಳೆ, ಕರಕರೆಯಾಗಿ ಪರಿಣಮಿಸಿ, ಕೇಳುಗರ ತಾಳ್ಮೆಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹಾಗಾಗದಂತೆ ಕಲಾವಿದ ಇಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಕ್ಷಗಾನ ಬಯಲಾಟದಲ್ಲಿ ಸರಸ್ವತಿ (ಮಾತು) ಸಾಲಂಕೃತ ಮದುಮಗಳಾಗಿ ಕಾಣಿಸಿಕೊಂಡರೆ ತಾಳಮದ್ದಳೆಯಲ್ಲಿ ಅದೇ ಸರಸ್ವತಿ ನಿರಾಭರಣ ಯೋಗಿನಿಯಂತೆ, ಪ್ರೌಢಗೃಹಿಣಿಯಂತೆ ಮಾರ್ಪಡುತ್ತಾಳೆ.

ಶೇಣಿ ಗೋಪಾಲಕೃಷ್ಣ ಭಟ್
ತಾಳಮದ್ದಳೆಯ ಮತ್ತೊಂದು ವೈಶಿಷ್ಟ್ಯ ಸಮಯಸ್ಫೂರ್ತಿ, ಪ್ರತ್ಯುತ್ಪನ್ನಮತಿತ್ವ. ಅದಿಲ್ಲದವ ಎಷ್ಟೇ ವಿದ್ವಾಂಸನಾಗಿದ್ದರೂ, ಅಪಾರ ಜ್ಞಾನಿಯಾಗಿದ್ದರೂ, ನಿಷ್ಪ್ರಯೋಜಕನೆನಿಸಿಕೊಂಡು ಬಿಡುತ್ತಾನೆ. ತೀವ್ರತರ ಅವಮಾನಕ್ಕೆ ಗುರಿಯಾಗೇಕಾಗುತ್ತದೆ. ಹಾಗಿರುತ್ತದೆ ಎದುರಾಳಿಯ ಮಾತಿನ ಅಲಗು, ಮಸೆತ, ಹೊಡೆತ.

ತಾಳಮದ್ದಳೆ ಅದೆಂತಹ ಸುಂದರ ಕಲಾಪ್ರಕಾರವೋ, ಹೃದ್ಯವೋ, ರಸ್ಯವೋ, ಆಸ್ವಾದ್ಯವೋ ಅಷ್ಟೇ ನೀರಸವೂ ವಿಸಂಗತವೂ ಆಗುವುದುಂಟು. ಅದಕ್ಕೆ ಅರ್ಥಧಾರಿಗಳ ವ್ಯಕ್ತಿಪ್ರತಿಷ್ಠೆ, ಅಹಂಕಾರ, ಅನಧ್ಯಯನಶೀಲತೆ, ಮೊಂಡುತನ, ಒಟ್ಟಂದಕ್ಕೆ ಮನಗೊಡದಿರುವುದು, ಕಥೆಯೇ ಗೊತ್ತಿಲ್ಲದಿರುವುದು ಹೀಗೆ ಹಲವು ಕಾರಣಗಳನ್ನು ನೀಡಬಹುದು.

ತಾಳಮದ್ದಳೆಗೂ ತೇಜೋವಧೆಗೂ ಗಾಢ ಸಂಬಂಧವಿದೆ. ಒಮ್ಮೊಮ್ಮೆ ಕಲಾವಿದರ ವೈಯಕ್ತಿಕ ದ್ವೇಷಾಸೂಯೆಗಳು ಇಲ್ಲಿ ತಲೆ ಹಾಕುವುದುಂಟು. ವಿನೋದ, ದ್ವೇಷ, ವಿರೋಧ ಇಲ್ಲಿ ಸಹಜ. ಮಾತಿನ ಜಾಣ್ಮೆಯಿಲ್ಲದವನಿಗೆ ಇಲ್ಲಿ ಜಾಗವೇ ಇರುವುದಿಲ್ಲ. ಹಿಂದೊಂದು ಕಾಲದಲ್ಲಿ ತಾಳ ಮದ್ದಳೆಯೆನ್ನುವುದು ಕೇವಲ ಪಾಮರ ರಂಜನೆಯಾಗಿತ್ತು. ಆದರೆ ಇಂದು ಹಾಗಲ್ಲ, ಹೆಸರುವಾಸಿ ಯಕ್ಷಗಾನ ಕಲಾವಿದರು, ಉತ್ತಮ ಚಿಂತಕರು, ಪಂಡಿತರು, ಪ್ರಾಮಾಣಿಕ ಅಧ್ಯಯನಶೀಲರು ಭಾಗವಹಿಸುತ್ತಾ ಇದ್ದಾರೆ.

ತಾಳಮದ್ದಳೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಲ್ಪೆ ರಾಮದಾಸ ಸಾಮಗ, ಡಾ. ಎಂ. ಪ್ರಭಾಕರ ಜೋಶಿ, ಶಂಭು ಶರ್ಮಾ ವಿಟ್ಲ, ಕೆ. ಗೋವಿಂದಭಟ್ಟ, ಕುಂಬ್ಳೆ ಸುಂದರರಾವ್, ವಿಶ್ವೇಶ್ವರ ಭಟ್ಟ, ಸುಣ್ಣಂಬಳ, ಉಮಾಕಾಂತ ಭಟ್ಟ ಮೊದಲಾದವರು ತಾಳಮದ್ದಳೆಯ ಪರಿಧಿಯನ್ನು ಗಗನದೆತ್ತರ ಏರಿಸಿದ್ದಾರೆ.

***********


ಕೃಪೆ : Prajavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ